ತಟ್ಟಿನ ಶೀತ -
ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳಿಗೆ ವಿಶಿಷ್ಟವಾದ ಒಂದು ಅಂಟುರೋಗ.  (ಗ್ಲ್ಯಾಂಡರ್ಸ್).  ಕೆಲವೇಳೆ ಕುರಿ, ಮೇಕೆಗಳಿಗೂ ಅಂಟಬಹುದು.  ಇದಕ್ಕೆ ಫಾರ್ಸಿ ಎಂದೂ ಹೆಸರಿದೆ. ರೋಗದ ಪ್ರಾಣಿಗಳನ್ನು ಮುಟ್ಟಿದಾಗ ಇಲ್ಲವೇ ರೋಗದ ಊತಕಗಳಿಗೆ ತಾಕಿದಾಗ ಅಥವಾ ಪ್ರಯೋಗಾಲಯದಲ್ಲಿ ರೋಗಾಣುವಿನ ತಳಿಯೆಬ್ಬಿಸುವಾಗ ಮಾನವನಿಗೆ ಈ ರೋಗದ ಸೋಂಕು ಹತ್ತಬಹುದು.  ರೋಗಹತ್ತಿದ ಕುದುರೆಯ ಮಾಂಸವನ್ನು ಪ್ರಾಣಿಸಂಗ್ರಹಾಲಯದ ಪ್ರಾಣಿಗಳು ತಿಂದರೆ ಅವುಗಳಿಗೆ ರೋಗಬರಬಹುದು.  ದನ ಮತ್ತು ಹಂದಿಗಳಿಗೆ ಬರುವುದಿಲ್ಲ. ಕುದುರೆಗಿಂತಲೂ ಕತ್ತೆ, ಹೇಸರಗತ್ತೆಗಳಲ್ಲಿ ಈ ರೋಗದ ಕಾಟ ಜಾಸ್ತಿ.

ಕತ್ತೆ, ಕುದುರೆಗಳ ಈ ರೋಗದ ವಿಚಾರವಾಗಿ  ಹಿಪಾಕ್ರಟಿಸ್ (ಕ್ರಿಪೂ 425) ಬರೆದಿದ್ದಾನೆ.  ಡೇನಿಷ್ ದನವೈದ್ಯ ವೈಬೋರ್ಗ್ ಇದನ್ನು ಮೊತ್ತ ಮೊದಲು (ಕ್ರಿಶ 1797) ಕ್ರಮವಾಗಿ ವಿವರಿಸಿ ಇದು ಅಂಟುರೋಗವೆಂದು ಗುರುತಿಸಿದ.  ಇದರ ಕಾರಕವಾದ ದಂಡಾಣು ಜೀವಿಯನ್ನು (ಬ್ಯಾಸಿಲಸ್) ಜರ್ಮನಿಯಲ್ಲಿ ಬೇರ್ಪಡಿಸಿ ಗುರುತಿಸಿದ ಲಫ್ಲರ್ ಮತ್ತು ಷೂಟ್ಜ್ ಇದನ್ನು ಬ್ಯಾಸಿಲಸ್ ಮ್ಯಾಲಿಯೈ ಎಂಬುದಾಗಿ ಹೆಸರಿಸಿದರು. ಪಾರಿಭಾಷಿಕವಾಗಿ ಇದಕ್ಕೀಗ ಫೀಫರೆಲ್ಲ ಮ್ಯಾಲಿಯೈ ಎಂಬ ಹೆಸರುಂಟು.  ಸಾಮಾನ್ಯವಾಗಿ ಇದನ್ನು ತಟ್ಟಿನ ಶೀತದ ದಂಡಾಣುಜೀವಿ ಎನ್ನುವುದಿದೆ.  ಇದು ಕೊರಡಾಂಗಗಳಿಲ್ಲದ, ಗ್ರಾಮ್ ಬಣ್ಣವೇರದ, ಬೀಜಕಣ (ಸ್ಪೋರ್) ಅಗದ, ಚಲಿಸದ, ಪ್ರಯೋಗಾಲಯದಲ್ಲಿ ಸುಲಭವಾಗಿ ತಳಿಯೆಬ್ಬಿಸಬಹುದಾದ ಒಂದು ದಂಡಾಣುಜೀವಿ.  ಕಾವೇರಿಸಿದಾಗ ಮತ್ತು ಒಣಗಿಸಿದಾಗ  ಸುಲಭವಾಗಿ ಸಾಯುತ್ತದೆ.   ಒಳ್ಳೆಯ ನೀರಿನಲ್ಲಿ 20 ದಿವಸಗಳ ತನಕ ಬದುಕುತ್ತದೆ.

ರೋಗ ಹತ್ತಿರುವ ಪ್ರಾಣಿಗಳಲ್ಲಿ ಈ ರೋಗಾಣುವನ್ನು ಮೂಗಿನ ಸಿಂಬಳವೇ ಅಲ್ಲದೆ ಮೈಮೇಲೆ ಎದ್ದಿರುವ ಕುರು, ಹುಣ್ಣುಗಳಿಂದಲೂ ಫುಪ್ಪುಸಗಳು, ಫುಪ್ಪಸ ಮತ್ತು ದವಡೆ ತಳದ ದುಗ್ಧಗ್ರಂಥಿಗಳ ರೋಗ ಹತ್ತಿದ ಗಂಟುಗಳ ಸುರಿತದಿಂದಲೂ ಬೇರ್ಪಡಿಸಬಹುದು.  ಮುಖ್ಯವಾಗಿ ಹಿಂಗಾಲಿನ ಮೇಲೂ ಮೈಮೇಲೆ ಬೇರೆಡೆಗಳಲ್ಲೂ ಫಾರ್ಸಿ ಗಂಟುಗಳ ದುಗ್ಧನಾಳಗಳ ಉದ್ದಕ್ಕೂ ಚರ್ಮದ ಕೆಳಗೆ ಏಳುತ್ತವೆ.  ಇವು ಕುರುಗಳಾಗಿ ಮೆತ್ತಗಾಗಿ ಒಡೆದುಕೊಂಡು  ಎಣ್ಣೆಯಂಥ ಕೀವು ಸುರಿವ ಕೋಚು ಹುಣ್ಣುಗಳಾಗುವುವು.  ದುಗ್ಧನಾಳಗಳೂ ಊದಿಕೊಂಡು ದಪ್ಪ  ಫಾರ್ಸಿ ಹುರಿಗಳಾಗುವುವು.  ಕೊನೆಗೆ ಆನೆಕಾಲು ಕೂಡ ಆಗಬಹುದು.
ರೋಗ ಬಹಿರಂಗವಾಗಿರುವ ಮತ್ತು ಆಂತರಿಕವಾಗಿರುವ ಎರಡು ರೀತಿ ಪ್ರಾಣಿಗಳಿಂದಲೂ  ಸೋಂಕು ಹರಡುತ್ತವೆ.  ರೋಗದವೂ ರೋಗವಿಲ್ಲದವೂ ಒಂದೇ ಕಡೆ ಸೇರಿದ್ದರೆ ರೋಗ ಬೇಗನೆ ಹರಡುತ್ತವೆ.  ಪ್ರಾಣಿಯ ಮೂಗಿನ ಸಿಂಬಳ, ಕಫ. ಹುಣ್ಣಿನ ರೋಸುನೀರು ಕೀವುಗಳಿಂದ ಸೋಂಕು ಆಹಾರ ಪಾನೀಯಗಳ ಮೂಲಕ ರೋಗ ಹಬ್ಬುತ್ತದೆ.  ಸಗಣಿ ಗಂಜಳ ಮತ್ತು ಉಸಿರಿನ ಮೂಲಕ ಸೋಂಕು ಹರಡುವುದು ಅಪರೂಪ.  ಚರ್ಮಕ್ಕೆ ಕೃತಕವಾಗಿ ಸೋಂಕು ಹತ್ತಿಸಿದರೆ ಕುರು, ಹುಣ್ಣೇಳಲು, 3 - 5 ದಿವಸಗಳು ಹಿಡಿಯುತ್ತವೆ.  ಸೋಂಕು ಹತ್ತಿದ ಬಳಿಕ ಸಾಮಾನ್ಯವಾಗಿ ಹೆಚ್ಚು ಕಡಿಮೆ 2 ವಾರಗಳಿಂದ ಹಿಡಿದು 2 - 3 ತಿಂಗಳ ತನಕ ರೋಗ ಒಳಗೇ ಕುಮುಲುತ್ತಿದ್ದು  ತರುವಾಯ ಹೊರಗಾಣಿಸಿಕೊಳ್ಳುತ್ತದೆ.  ಹೊರಗಡೆ ಬಯಲಲ್ಲಿ ಇರುವವಕ್ಕಿಂತಲೂ ಲಾಯಗಳಲ್ಲಿ ಕಟ್ಟಿಹಾಕಿ, ಚೆನ್ನಾಗಿ ದುಡಿಸಿದ ಇಲ್ಲವೇ ಸಣಕಲ ಕುದುರೆಗಳಲ್ಲಿ ರೋಗ ಬಲು ಬೇಗನೇ ತಲೆದೋರುವುದು.  ಹೇಸರಗತ್ತೆ ಮತ್ತು ಕತ್ತೆಗಳಲ್ಲಿ ರೋಗ ಕುಮುಲುವ ಕಾಲ ಕಡಿಮೆ.

ರೋಗದ ಕುದುರೆಗಳಲ್ಲಿ ಒಂದು ಮೂಗಿನ ಹೊಳ್ಳೆಯಿಂದ ಇಲ್ಲವೇ ಎರಡೂ ಹೊಳ್ಳೆಗಳಿಂದ ಯಾವಾಗಲೂ ಶೀತದ ಸಿಂಬಳ ಸುರಿಯುತ್ತಿರುವುದು.  ಕೆಳದವಡೆ ಕೆಳಗಿನ ದುಗ್ಧಗ್ರಂಥಿಗಳು ಊದಿಕೊಂಡು ಗಡುಸಾಗಿ ಕೊನೆಗೆ ಹುಣ್ಣಾಗಿ ಕೀವು ಸುರಿಯುವುದು, ದುಗ್ಧನಾಳಗಳು ಗಟ್ಟಿ ನಾರು ಗಂಟುಗಳಂತೆ ಇರುತ್ತವೆ.  ರೋಗ ಆಂತರಿಕವಾಗಿರುವ ಪ್ರಾಣಿಗಳಲ್ಲಿ ಮೂಲವಾಗಿ ಫುಪ್ಪುಸಗಳಲ್ಲಿ ಸೋಂಕು ನೆಲೆಸಿ ಕ್ಷಯಗಂತಿ ತೆರನ ಗಂಟುಗಳೂ ಕೀವು ಸುರಿವ ಹುಣ್ಣುಗಳೂ ಒಳಗೇ ಎದ್ದಿರುತ್ತವೆ.  ಅಲ್ಲಿಂದ ಬೇರೆ ಒಳಾಂಗಗಳಿಗೂ ಮೂಗು, ಗಂಟಲು, ಚರ್ಮಗಳಿಗೂ ಹರಡಿಕೊಳ್ಳುತ್ತದೆ. ತೊರಳೆ ಈಲಿಗಳಲ್ಲೂ ಗಂಟುಗಳೇಳುವುವು. ಅಂಥ ಪ್ರಾಣಿಗಳಿಗೆ ಬಲುಮಟ್ಟಿಗೆ ಉಸಿರಾಟದ ತೊಂದರೆ ಇರುವುದು.  ಮೂಗಿನಲ್ಲಿ ಎಲ್ಲೆಲ್ಲೂ  ಹುಣ್ಣುಗಳೆದ್ದು ಕೆಲವೇಳೆ ಕೊಳೆಯಬಹುದು.  ಮೂಗಿನ ಸಿಂಬಳ ನಸುಹಳದಿ ಕಂದು ಬಣ್ಣಕ್ಕಿದ್ದು  ಅಂಟಂಟಾಗಿ ಕೆಲವೇಳೆ  ರಕ್ತಗೂಡಿರಬಹುದು.

ಹೊರಗೆ ರೋಗ ಕಾಣಿಸಿಕೊಳ್ಳುವ ವಾರಗಳು, ತಿಂಗಳುಗಳ ಮುಂಚಿನಿಂದಲೇ ಸಿಂಬಳ, ಕಫಗಳ ಮೂಲಕ ಸೋಂಕು ಹರಡುತ್ತಿರುತ್ತದೆ.  ಅಂಥ ಹೊತ್ತಿನಲ್ಲಿ ಬೇರೂರಿದ ರೋಗವನ್ನು ಪತ್ತೆಹಚ್ಚಲು ಮ್ಯಾಲ್ಲೀನ್ ಪರೀಕ್ಷೆ ಉಂಟು.  ಕತ್ತೆಯಲ್ಲಿ ರೋಗ ಕೂರಾಗಿರುವುದು; ಕುದುರೆಯಲ್ಲಿ ಇದು ಬೇರೂರಿರುವುದು; ಹೇಸರಗತ್ತೆಯಲ್ಲಾದರೋ ಇವೆರಡರ ನಡುವಿನದು ಇರುವುದು.   ರೋಗದ ದಂಡಾಣು ಜೀವಿಯ ಅಚ್ಚತಳಿಗಳ ಜೀವಿ ವಿಷ (ಟಾಕ್ಸಿನ್) ಇಲ್ಲವೆ ರೋಗಾಣುಸಾರಕವನ್ನು  ಈ ಪರೀಕ್ಷ್ಷೆಯಲ್ಲಿ ಬಳಸುವುದನ್ನು ರಷ್ಯದಲ್ಲಿ ಕಾಲ್ನಿಂಗ್, ಹೆಲ್ಮಸ್, ಮತ್ತು ಅಮೆರಿಕದ ಪಿಯರ್ಸನ್ ಆವಿಷ್ಕರಿಸಿದರು (1891).  ಈ ವಸ್ತುಗಳನ್ನು ಕಣ್ಣಿನಲ್ಲಿ ಹಾಕಿದಾಗ ಇಲ್ಲವೇ ಕೆಳಗಿನ ರೆಪ್ಪೆಗೋ ಚರ್ಮದೊಳಗೋ ಚುಚ್ಚುಮದ್ದಾಗಿ ಸೇರಿಸಿದಾಗ ಅಗುವ ಊತ, ಕೀವುಸುರಿತಗಳಿಂದ - ಈ ಪರೀಕ್ಷೆ ಮಾಡುವುದುಂಟು.  ಇವುಗಳಲ್ಲಿ ಚರ್ಮದಡಿಯ ಮತ್ತು  ರೆಪ್ಪೆ ಚುಚ್ಚುವ ಪರೀಕ್ಷೆಗಳು ಮಾತ್ರ ನೆಚ್ಚತಕ್ಕವು.  ಒಗ್ಗದಿಕೆಯ (ಅಲರ್ಜಿ) ಈ ಮ್ಯಾಲ್ಲೀನ್ ಪರೀಕ್ಷೆಯಲ್ಲದೆ  ಮುಖ್ಯವಾಗಿ ಮಾನವನ ಈ ರೋಗದಲ್ಲಿ ಪ್ರಯೋಗಾಲಯದ ಹಲವು ಪರೀಕ್ಷೆಗಳನ್ನು ಕೂಡ ನಡೆಸುವುದುಂಟು.

ರೋಗದಿಂದ ಸತ್ತ ಪ್ರಾಣಿಗಳನ್ನು ಕೊಯ್ದು ನೋಡಿದರೆ ಕೆಲವು ಅಂಗಗಳಲ್ಲಿ ಒಂದು ಇಲ್ಲವೇ ಹೆಚ್ಚು ರೋಗಗ್ರಸ್ತ ಸ್ಥಳಗಳು ಕಾಣಬಹುದು. ಮುಖ್ಯವಾದವು ಹಿಂಗಾಲುಗಳ ಮೇಲಿನ ಗಂಟುಗಳು, ಕೀವುಗುಳ್ಳೆಗಳು, ಹುಣ್ಣುಗಳು; ಮೂಗಿನ ಕಂಬ, ಮೂಗಿನ ಮೂಳೆಗಳು, ಧ್ವನಿನಾಳ, ಉಸಿರ್ನಾಳಗಳ ಮೇಲೆ ದುಗ್ಧ ಗಂಟುಗಳು ಮತ್ತು ಹುಣ್ಣುಗಳು ಫುಪ್ಪುಸಗಳೊಳಗೆ ಕ್ಷಯಗಂತಿಗಳಂಥ ಗಂಟುಗಳು; ದವಡೆಯಡಿಯ, ಗಜ್ಜಲಿನ ದುಗ್ಧಗ್ರಂಥಿಗಳಲ್ಲಿ ಗಂಟುಗಳು.  ಇವಲ್ಲದೆ, ಒಮ್ಮೊಮ್ಮೆ ಈಲಿ, ತೊರಳೆ, ಮೂತ್ರಪಿಂಡಗಳಲ್ಲೂ ರೋಗಗ್ರಸ್ತ ಸ್ಥಳಗಳಿರಬಹುದು.   ಪ್ರಾಣಿಗಳಲ್ಲಿ ತಟ್ಟಿನ ಶೀತ ಚಿಕಿತ್ಸಾತೀತ.
ಈ ಅಂಟುರೋಗ ಹತ್ತಿದ್ದನ್ನು ತಪ್ಪದೇ ಕೂಡಲೇ ವರದಿ ಮಾಡುವುದು, ಮ್ಯಾಲ್ಲೀನ್ ಪರೀಕ್ಷೆ ಪ್ರತಿಕ್ರಿಯೆ ತೋರುವ ಪ್ರಾಣಿಗಳನ್ನೆಲ್ಲ ಕೊಲ್ಲುವುದು, ರೋಗದ ಪ್ರಾಣಿಗಳಿದ್ದ ಜಾಗವನ್ನು ಚೆನ್ನಾಗಿ ಚೊಕ್ಕಪಡಿಸಿ ಸೋಂಕು ಕಳೆಯುವುದು - ಇವು ಮಾತ್ರ ರೋಗವನ್ನು ಹತೋಟಿಗೆ ತಂದು ಅಡಗಿಸಲು ಇರುವ ಪರಿಣಾಮಕಾರಿ ಉಪಾಯಗಳು.  ಈ ಮೂಲಕವೇ ಅಮೆರಿಕ, ಗ್ರೇಟ್ ಬ್ರಿಟನ್, ಕೆನಡಗಳಲ್ಲಿ ತಟ್ಟಿನ ಶೀತವನ್ನು ಹೇಳಹೆಸರಿಲ್ಲದಂತೆ ಹೋಗಲಾಡಿಸಲಾಗಿದೆ.  ಯೂರೋಪ್, ಏಷ್ಯ, ಅಫ್ರಿಕಗಳ ಕೆಲವೆಡೆಗಳಲ್ಲಿ ಈ ರೋಗ ಇನ್ನೂ ಇರುವಂತಿದೆ.

ಮಾನವನಲ್ಲಿ ತಟ್ಟಿನ ಶೀತ :  ಹಿಪಾಕ್ರಟೀಸನ ಕಾಲದಿಂದಲೂ ಕುದುರೆಗಳು ಈ ರೋಗ ಗೊತ್ತಿದ್ದರೂ 1830ರ ತನಕ ಇದನ್ನು ಮಾನವನ ರೋಗವಾಗಿ ಯಾರೂ ವರ್ಣಿಸಿರಲಿಲ್ಲ. ಅಲ್ಲ್ಲಿಂದೀಚಿಗೆ ಬಹಳ ಜನ ಈ ರೋಗದಿಂದ ನರಳುವುದನ್ನು ಗುರುತಿಸಲಾಗಿದೆ.  1900ರಲ್ಲಿ ಜರ್ಮನಿಯ ಅಟೊಫಾನ್ ಬೊಲಿಂಜರ್ 120 ರೋಗಿಗಳ ವಿವರಗಳನ್ನು ವರದಿ ಮಾಡಿದ.  ಕೆನಡದಲ್ಲಿ ರಾಬಿನ್ಸ್ 156 ರೋಗಿಗಳ ವಿಚಾರವಾಗಿಯೂ (1906) ಇಂಗ್ಲೆಂಡಿನ ವಿಲಿಯಮ್ ಹಂಟಿಂಗ್ ತಾನೇ ಚಿಕಿತ್ಸೆ ನಡೆಸಿದ 10 ರೋಗಿಗಳ ವಿಚಾರವಾಗಿಯೂ ವರದಿ ಮಾಡಿದರು.   ಒಂದನೆಯ ಮಹಾಯುದ್ಧ ನಿಂತ ಬಳಿಕ ರಷ್ಯದಲ್ಲಿ ತಟ್ಟಿನ ಶೀತರೋಗವನ್ನು ಕುದುರೆಗಳಲ್ಲಿ ಚೆನ್ನಾಗಿ ಹತೋಟಿಪಡಿಸದ್ದರಿಂದ ಕೆಲವು ಕಾಲ ಜನರಲ್ಲೂ ಅದು ಬಹಳ ಹರಡಿ ಹೆಚ್ಚಿತ್ತು.  ಕಸಬಿನ ಸಂಬಂಧವಾಗಿ ರೋಗದ ಕುದುರೆಗಳೊಂದಿಗೇ ಇರಬೇಕಾಗಿದ್ದ ಅವನ್ನು ಮುಟ್ಟಿಕೊಳ್ಳುವುದರಿಂದಲೂ ರೋಗ ಹತ್ತಿದ ಕುದುರೆಯ ಹೆಣಪರೀಕ್ಷೆ ಮಾಡುವಾಗಲೂ ರೋಗಾಣುವನ್ನು ಪ್ರಯೋಗಾಲಯದಲ್ಲಿ ತಳಿಯೆಬ್ಬಿಸುವಾಗಲೂ ಈ ರೋಗ ಮಾನವನಿಗೆ ಅಂಟುತ್ತದೆ.  ಮುಖ್ಯವಾಗಿ ಪಶುವೈದ್ಯರಿಗೆ ಚರ್ಮಗಾಯ ಇಲ್ಲವೇ ಉಸಿರಿನ ಮೂಲಕ ಹತ್ತುವುದು ಸಾಮಾನ್ಯ.  ಅದರೆ ಒಬ್ಬ ಮಾನವರೋಗಿಯಿಂದ ಇನ್ನೊಬ್ಬನಿಗೆ ಹರಡುವುದು ಬಲು ವಿರಳ.

ರೋಗದ ಸೋಂಕು ಸರಾಸರಿಯಾಗಿ 3 - 5 ದಿವಸಗಳು ಕುಮುಲುತ್ತಿದ್ದು ಆಮೇಲೆ ತಲೆದೋರುವುದು.  ಕೂರಾಗಿ ತಟ್ಟಿನ ಶೀತರೋಗ ಸಾಮಾನ್ಯವಾಗಿ 15 - 30 ದಿವಸÀಗಳಿರುವುದು.  ರೋಗ ಕೂರಾಗಿರಬಹುದು ಇಲ್ಲವೇ ಬೇರೂರಿ ದೀರ್ಘಕಾಲಿಕವಾಗಬಹುದು.  ರೋಗ ಹತ್ತಿ ಕಾಣಿಸಿಕೊಳ್ಳುವ ರೀತಿ ವಿಶಿಷ್ಟವಾಗಿರುತ್ತದೆ.  ಸೋಂಕು ಹತ್ತಿದ ಕೆಲವೇ ದಿವಸಗಳಲ್ಲಿ ಮೈಯೆಲ್ಲೆಲ್ಲ ಇರಸುಮುರುಸು, ಜ್ವರ, ಆಲಸಿಕೆ, ಸುಸ್ತು, ಹಸಿವು ನಾಶ, ಕಾಮಾಲೆ, ಓಕರಿಕೆ ತಲೆನೋವು, ಕೀಲುನೋವು ಕಾಣಿಸಿಕೊಳ್ಳುತ್ತವೆ.  ಮುಖ ಕೈಕಾಲುಗಳ  ವಿಸರ್ಪಿಯಂತೆ (ಎರಿಸಿಪೆಲಾಸ್) ಊದಿಕೊಂಡು ಎನ್ನೂ ಬೇಗನೆ ಚಿಹ್ನೆಗಳು ಕಾಣಿಸಿಕೊಳ್ಳುತ್ತದೆ.  ಸೋಂಕು ಹತ್ತಿದೆಡೆಯಲ್ಲಿ ಊತವಾಗಿ, ಹುಣ್ಣೆದ್ದು ಹೊಲಸಾದ ರೋಸು ಸುರಿಯುತ್ತದೆ.  ಆಮೇಲೆ ಹತ್ತಿರದ ದುಗ್ಧನಾಳಗಳಿಗೂ ದುಗ್ಧಗಂಟುಗಳಿಗೂ ಸೋಂಕು ಹರಡುವುದು, ಅಲ್ಲದೆ ಚರ್ಮದಡಿಯಲ್ಲಿ, ನೋಯುವ ಹರಳಗಂತಿ (ಗ್ರಾನ್ಯುಲೋಮ) ತೆರನ ಪಾರ್ಸಿಗಂಟುಗಳು ಏಳುತ್ತವೆ.  ಮೊದಮೊದಲು ಇವು ಗಡುಸಾಗಿ ನೋಯುತ್ತಿದ್ದು ಆಮೇಲೆ ಕೀವುಕುರುಗಳಾಗಿ ಒಡೆದು ಕೊನೆಗೆ ಹೆಕ್ಕಳಿಕೆ ಮುಚ್ಚಿದ ವ್ರಣಗಳಾಗುವುವು.  ಕೂರಾದ ತಟ್ಟಿನ ಶೀತದಲ್ಲಿ, ಅದರಲ್ಲೂ ಮೂಗಿನಲ್ಲಿ ಸೋಂಕು ಹತ್ತಿದಾಗ, ಶೀತವಾಗಿ ಬಹಳಷ್ಟು ಊದಿಕೊಳ್ಳುತ್ತದೆ.  ಮೂಗಿನ ಕಂಬದಲ್ಲೂ  ಹುಣ್ಣೇಳುತ್ತವೆ.  ಬೇನೆ ಜೋರಾದಾಗ ಮೈಮೇಲೆ ಹುಣ್ಣ್ಣುಗಳು ಎಲ್ಲಿ ಎದ್ದರೂ ಅದರ ತಳದಲ್ಲಿರುವ ಮೃದ್ವಸ್ಥಿಯನ್ನೂ ಮೂಳೆಯನ್ನೂ ತಿಂದುಹಾಕಬಹುದು.  ಮೈಯಲ್ಲಿ ಎಲ್ಲಾದರೂ ಒಂದೆಡೆಯಲ್ಲಿ ಹುಣ್ಣಾಗಿ ರೋಗ ಅಷ್ಟಕ್ಕೇ ನಿಲ್ಲಲೂಬಹುದು; ಇಲ್ಲವೇ ಕಣ್ಣುಗಳು, ಬಾಯಿ, ಗಂಟಲು, ಉಸಿರ್ನಾಳಗಳಿಗೂ ಹಬ್ಬಬಹುದು.  ಆಗಲೇ ಮೈಯೆಲ್ಲ ಬೇನೆಯಾದಂತೆ ತೋರುವುದು, ಸ್ನಾಯುಗಳಲ್ಲೂ ಕುರುಗಳಾಗಿ ನ್ಯೂಮೋನಿಯ ಮತ್ತು ಬೆÉೀಧಿಗಳಾಗಿ ಸೊರಗಿ ಸೊರಗಿ ರೋಗಿ ಕುಸಿದುಬೀಳುತ್ತಾನೆ.  ಬೇರೂರಿದ ರೂಪವು ಕೂರಾದ ರೂಪದಲ್ಲೇ ಇರುವುದಾದರೂ ರೋಗಲಕ್ಷಣಗಳು ಅಷ್ಟು ಜೋರಾಗಿರದೆ ಹುಣ್ಣುಗಳು ನಿಧಾನವಾಗಿ ಹರಡಲು ಹಲವು ತಿಂಗಳು ಹಿಡಿಯುತ್ತದೆ.

ರೋಗದ ನಿದಾನ:  ಕೂರಾದ ರೂಪ ಯಾವುದಾದರೂ ಚರ್ಮದ ಹುಣ್ಣನ್ನೋ ಕೀವುಜನಿಕ ಚರ್ಮದುರಿತವನ್ನೋ ಅಣಬೆ ಸೋಂಕುಗಳನ್ನೋ ಹೋಲಬಹುದು.  ಮೈಬೇನೆ ಹರಡಿ ಬಂದು ಇರುಸುಮುರುಸಾದಾಗ ವಿಷಮಶಿತ ಜ್ವರ, ಸಿಡುಬು, ಸೀತಾಳಸಿಡುಬುಗಳನ್ನು ಹೋಲಬಹುದು.   ದೀರ್ಘಕಾಲಿಕ ರೂಪದ ಹುಣ್ಣು ಕಿರಣಬೆಯ (ಆಕ್ಸಿನೋಮೈಕೋಸಿಸ್).  ಉಪದಂಶದ ಇಲ್ಲವೇ ಕ್ಷಯದ ಹುಣ್ಣುಗಳನ್ನು ಹೋಲಬಹುದು.  ರೋಗಿಯ ಕಸಬು ರೋಗದ ವಿಷಯವಾಗಿ ಮುಖ್ಯ ಸುಳಿವನ್ನು  ಕೊಡುತ್ತದೆ.  ಅದರೆ ರೋಗ ನಿರ್ಧಾರವಾಗುವುದು ಹುಣ್ಣಿನ ಏಕಾಣುಜೀವಿಕ ಪರೀಕ್ಷೆಯಿಂದಲೇ. ಕೂರಾದ ತಟ್ಟಿನ ಶೀತದ ರೋಗಿಗಳಲ್ಲಿ ನೂರಕ್ಕೆ 60 ಮಂದಿ ಕೆಲವು ದಿವಸಗಳಿಂದ ಹಿಡಿದು 6 ವಾರಗಳೊಳಗಾಗಿ   ಸಾಯುವರು.  ಬೇರೂರಿದ್ದಾದರೆ ವರ್ಷಗಟ್ಟಳೆ ಮುಂದುವರಿದು ಆಗಾಗ್ಗೆ ಕೆರಳುತ್ತಿರುವುದು.

ಚಿಕಿತ್ಸೆ:  ಮಾನವನಿಗೆ ತಟ್ಟಿನ ಶೀತ ಬಾರದಂತೆ ಮುನ್ನೆಚ್ಚರಿಕೆವಹಿಸುವುದು ಮುಖ್ಯ.  ರೋಗದಿಂದ ಸತ್ತ ಪ್ರಾಣಿಗಳನ್ನು ಮುಟ್ಟಿಕೊಳ್ಳುವುದರಲ್ಲಿ ಎಚ್ಚರವಿರಬೇಕು. ಹಾಗೆಯೇ, ಪ್ರಯೋಗಾಲಯಗಳಲ್ಲಿ ಈ ರೋಗಾಣುಗಳನ್ನು ಮೈಕೈಗಳಿಗೆ ಸೋಕಿಸಿಕೊಳ್ಳಬಾರದು.  ಸಲ್ಫಡಯಜೀóನ್ ಮತ್ತು ಸ್ಟ್ರೆಪ್ಟೊಮೈಸಿನ್‍ಗಳಿಂದ  ರೋಗ ಗುಣವಾಗುತ್ತದೆ.  ಆರೈಕೆಯೊಂದಿಗೆ, ಕೆಲವೇಳೆ ಶಸ್ತ್ರಕ್ರಿಯೆ ಮಾಡಬೇಕಾಗಬಹುದು.   ರೋUನಿರೋಧಕ ಲಸಿಕೆಗಳಿಂದಲೂ ಗುಣಕಂಡಿದೆ, ಮಾನವನಲ್ಲಿ ಈ ರೋಗವನ್ನು ತಡೆಯಬೇಕಾದರೆ ಕುದುರೆ, ಕತ್ತೆ, ಹೇಸರಗತ್ತೆಗಳಲ್ಲಿ ಈ ರೋಗ ಇಲ್ಲದಂತೆ ನೋಡಿಕೊಳ್ಳಬೇಕು.
  					  			(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ